ಅಘಟಿತ-ಘಟಿತನ ಒಲವಿನ ಶಿಶು ಕಟ್ಟಿದೆನು ಜಗಕ್ಕೆ ಬಿರುದನು ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಂಗಳಿಗೆ ಇಕ್ಕಿದೆನು ಕಾಲಲ್ಲಿ ತೊಡರನು ಗುರುಕೃಪೆಯೆಂಬ ತಿಗುರನಿಕ್ಕಿ ಮಹಾಶರಣೆಂಬ ತಿಲಕವನಿಕ್ಕಿ ಶಿವಶರಣೆಂಬ ಅಲಗ ಕೊಂಡು ನಿನ್ನ ಕೊಲುವೆ ಗೆಲುವೆ! ಬಿಡು ಬಿಡು ಕರ್ಮವೇ, ನಿನ್ನ ಕೊಲ್ಲದೇ ಮಾಣೆನು!! ಕಡೆಹಿಸಿಕೊಳ್ಪದೆನ್ನ ನುಡಿಯ ಕೇಳಾ- ಕೆಡದ ಶಿವಶರಣೆಂಬ ಅಲಗನೆ ಕೊಂಡು ನಿನ್ನ ಕೊಲುವೆ ಗೆಲುವೆ ನಾನು! ಬ್ರಹ್ಮಪಾಶವೆಂಬ ಕಳನನೆ ಸವರಿ ವಿಷ್ಣುಮಾಯೆಯೆಂಬ ಎಡಗೋಲ ನೂಕಿ ಎನ್ನೊಡೆಯ ಚೆನ್ನಮಲ್ಲಿಕಾರ್ಜುನಯ್ಯ ತಲೆದೂಗಲಿಕಾಡುವೆ ನಾನು.