ಅಕ್ಕ ಮಹಾದೇವಿ ವಚನಗಳು ೧೦

ಅಘಟಿತ-ಘಟಿತನ ಒಲವಿನ ಶಿಶು ಕಟ್ಟಿದೆನು ಜಗಕ್ಕೆ ಬಿರುದನು ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಂಗಳಿಗೆ ಇಕ್ಕಿದೆನು ಕಾಲಲ್ಲಿ ತೊಡರನು ಗುರುಕೃಪೆಯೆಂಬ ತಿಗುರನಿಕ್ಕಿ ಮಹಾಶರಣೆಂಬ ತಿಲಕವನಿಕ್ಕಿ ಶಿವಶರಣೆಂಬ ಅಲಗ ಕೊಂಡು ನಿನ್ನ ಕೊಲುವೆ ಗೆಲುವೆ! ಬಿಡು ಬಿಡು ಕರ್ಮವೇ, ನಿನ್ನ ಕೊಲ್ಲದೇ ಮಾಣೆನು!! ಕಡೆಹಿಸಿಕೊಳ್ಪದೆನ್ನ ನುಡಿಯ ಕೇಳಾ- ಕೆಡದ ಶಿವಶರಣೆಂಬ ಅಲಗನೆ ಕೊಂಡು ನಿನ್ನ ಕೊಲುವೆ ಗೆಲುವೆ ನಾನು! ಬ್ರಹ್ಮಪಾಶವೆಂಬ ಕಳನನೆ ಸವರಿ ವಿಷ್ಣುಮಾಯೆಯೆಂಬ ಎಡಗೋಲ ನೂಕಿ ಎನ್ನೊಡೆಯ ಚೆನ್ನಮಲ್ಲಿಕಾರ್ಜುನಯ್ಯ ತಲೆದೂಗಲಿಕಾಡುವೆ ನಾನು.

ಅಕ್ಕ ಮಹಾದೇವಿ ವಚನಗಳು ೯

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು ಹದುಳಿಗರಲ್ಲದವರಲ್ಲಿ ಗಂಧಾಕ್ಷತಯನೊಲ್ಲೆಯಯ್ಯ ನೀನು ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯ ನೀನು ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯ ನೀನು ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯ ನೀನು ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯ.

ಅಕ್ಕ ಮಹಾದೇವಿ ವಚನಗಳು ೮

ದೇವ, ಎನ್ನ ಹೃದಯಕಮಲದೊಳಗೆ ಪ್ರಜ್ವಳಿಪ್ಪ ಬೆಳಗೆ ದೇವ, ಎನ್ನ ಮನದ ಮೊನೆಯೊಳೊಪ್ಪುತಿರ್ಪ ಬೆಳಗಿನೊಳಗೆ ಗುರುವೆ ಬಾರ, ಪರವೆ ಬಾರ, ವರವೆ ಬಾರ, ದೇವದೇವ ಹರನೆ ಬಾರ, ಸುಕೃತಸಾರ ಸರ್ಪಹಾರ ಬಾರ ದೇವ ವೀರಭದ್ರ, ರುದ್ರ, ದುರಿತದೂರ, ವಿಶ್ವರೂಪ ಬಾರ ಮಾರಮಥನ, ಪುಣ್ಯಕಥನ, ಸಹಜಮಿಥುನರೂಪ ಬಾರ ತರಗಿರಿಯ ಪಿರಿಯ ಸಿರಿಯ ಸತ್ಯಶರಣ ಭರಣ ಬಾರ ಬಾರ ಫಲವೆ, ಫಲದ ರಸವೆ, ರಸದ ಸವಿಯ ಸುಖವೆ ಬಾರ ಬಾರ ಗುರುವೆ, ಬಾರ ಪರವೆ, ಬಾರ ವರವೆ ಮಲ್ಲಿನಾಥ ಬಾರ ಧನವೆ, ಬಾರ ಸುಕೃತಸಾರ ಬಾರ ಮಲ್ಲಿನಾಥ ಬರ ಸಿದ್ಧ, ಭವವಿರುದ್ಧ ಸುಪ್ರಸಿದ್ಧ ಮಲ್ಲಿನಾಥ ಬಾರ ಮುಡುಹು ಮುಂದಲೆಗಳ ಕುರುಳನೀವೆ ಮಲ್ಲಿನಾಥ ಬಾರ

ಅಕ್ಕ ಮಹಾದೇವಿ ವಚನಗಳು ೭

ಅಯ್ಯ, ಪಾತಾಳವಿತ್ತಿತ್ತ, ಶ್ರೀಪಾದವತ್ತತ್ತ ಬ್ರಹ್ಮಾಂಡವಿತ್ತಿತ್ತ, ಮಣಿಮುಕುಟವತ್ತತ್ತ ಅಯ್ಯ, ದಶದಿಕ್ಕುಇತ್ತಿತ್ತ, ದಶಭುಜಗಳತ್ತತ್ತ ಚೆನ್ನಮಲ್ಲಿಕಾರ್ಜುನಯ್ಯ, ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ!

ಅಕ್ಕ ಮಹಾದೇವಿ ವಚನಗಳು ೬

ಕಾಮ ಬಲ್ಲಿದನೆಂದರೆ ಉರುಹಿ ಭಸ್ಮವ ಮಾಡಿದ! ಕಾಲ ಬಲ್ಲಿದನೆಂದರೆ ಕೆಡಹಿ ತುಳಿದ! ಬ್ರಹ್ಮ ಬಲ್ಲಿದನೆಂದರೆ ಶಿರವ ಚಿವುಟಿಯಾಡಿದ! ಎಲೆ ಅವ್ವ, ನೀನು ಕೇಳಾ ತಾಯೆ, ವಿಷ್ಣು ಬಲ್ಲಿದನೆಂದರೆ ಮುರಿದು ಕಂಕಾಳವ ಪಿಡಿದ! ತ್ರಿಪುರದ ಕೋಟೆ ಬಲ್ಲಿತ್ತೆಂದರೆ ನೊಸಲ ಕಣ್ಣಿಂದುರುಹಿದನವ್ವ! ಇದು ಕಾರಣ ಚೆನ್ನಮಲ್ಲಿಕಾರ್ಜುನ ಗಂಡನೆನಗೆ! ಜನನಮರಣಕ್ಕೊಳಗಾಗದವನ ಬಲುಹನೇನ ಬಣ್ಣಿಪೆನವ್ವ!?

ಅಕ್ಕ ಮಹಾದೇವಿ ವಚನಗಳು ೫

ಶಿವಂಗೆ ತಪ್ಪಿದ ಕಾಲ ಭಸ್ಮವಾದುದನರಿಯಾ? ಶಿವಂಗೆ ತಪ್ಪಿದ ಕಾಮನುರಿದುದನರಿಯಾ? ಶಿವಂಗೆ ತಪ್ಪಿದ ಬ್ರಹ್ಮನ ಶಿರ ಹೋದುದನರಿಯಾ? ಚೆನ್ನಮಲ್ಲಿಕಾರ್ಜುನನ ಪಾದಕ್ಕೆ ತಪ್ಪಿದೆಡೆ ಭವಘೋರನರಕವೆಂದರಿಯಾ ಮರುಳೇ.

ಅಕ್ಕ ಮಹಾದೇವಿ ವಚನಗಳು ೪

ತನ್ನ ವಿನೋದಕ್ಕೆ ತಾನೇ ಸೃಜಿಸಿದ ಜಗತ್ತ! ತನ್ನ ವಿನೋದಕ್ಕೆ ತಾನೇ ಸುತ್ತಿದನದಕ್ಕೆ ಸಕಲ ಪ್ರಪಂಚ!! ತನ್ನ ವಿನೋದಕ್ಕೆ ತಾನೇ ತಿರಿಗಿಸಿದನನಂತ ಭವದುಃಖಂಗಳಲ್ಲಿ ಇಂತೆನ್ನ ಚೆನ್ನಮಲ್ಲಿಕಾರ್ಜುನದೇವನೆಂಬ ಪರಶಿವನು ತನ್ನ ಜಗದ್ವಿಲಾಸ ಸಾಕಾದ ಮತ್ತೆ ತಾನೇ ಪರಿವನಾ ಮಾಯಾಪಾಶವನು!

ಅಕ್ಕ ಮಹಾದೇವಿ ವಚನಗಳು ೩

ನೆಲದ ಮರೆಯ ನಿಧಾನದಂತೆ ಫಲದ ಮರೆಯ ರುಚಿಯಂತೆ ಶಿಲೆಯ ಮರೆಯ ಹೇಮದಂತೆ ತಿಲದ ಮರೆಯ ತೈಲದಂತೆ ಮರದ ಮರೆಯ ತೇಜಿದಂತೆ ಭಾವದ ಮರೆಯ ಬ್ರಹ್ಮನಾಗಿಪ್ಪ ಚೆನ್ನಮಲ್ಲಿಕಾರ್ಜುನನ ನಿಲವನಾರೂ ಅರಿಯಬಾರದು!

ಅಕ್ಕ ಮಹಾದೇವಿ ವಚನಗಳು ೨

ಈಳೆ-ನಿಂಬೆ-ಮಾವು-ಮಾದಲಕ್ಕೆ ಹುಳಿನೀರೆರೆದವರಾರಯ್ಯ? ಕಬ್ಬು-ಬಾಳೆ-ನಾರಿವಾಳಕ್ಕೆ ಸಿಹಿನೀರೆರೆದವರಾರಯ್ಯ? ಕಳವೆ-ಶಾಲಿಗೆ ಓಗರದ ಉದಕವನೆರೆದವರಾರಯ್ಯ? ಮರುಗ-ಮಲ್ಲಿಗೆ-ಪಚ್ಚೆ-ಮುಡಿವಾಳಕ್ಕೆ ಪರಿಮಳದುದಕವನೆರೆದವರಾರಯ್ಯ? ಇಂತೀ ಜಲ ಒಂದೆ, ನೆಲ ಒಂದೆ, ಆಕಾಶ ಒಂದೆ! ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ ತನ್ನ ಪರಿ ಬೇರಾಗಿಹ ಹಾಂಗೆ ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು ಹಲವು ಜಗಂಗಳ ಕೂಡಿಕೊಂಡಿದ್ದರೇನು? ತನ್ನ ಪರಿ ಬೇರೆ!

ಅಕ್ಕ ಮಹಾದೇವಿ ವಚನಗಳು ೧

ಅಘಟಿತ-ಘಟಿತನ ಒಲವಿನ ಶಿಶು ಕಟ್ಟಿದೆನು ಜಗಕ್ಕೆ ಬಿರುದನು ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಂಗಳಿಗೆ ಇಕ್ಕಿದೆನು ಕಾಲಲ್ಲಿ ತೊಡರನು ಗುರುಕೃಪೆಯೆಂಬ ತಿಗುರನಿಕ್ಕಿ ಮಹಾಶರಣೆಂಬ ತಿಲಕವನಿಕ್ಕಿ ಶಿವಶರಣೆಂಬ ಅಲಗ ಕೊಂಡು ನಿನ್ನ ಕೊಲುವೆ ಗೆಲುವೆ! ಬಿಡು ಬಿಡು ಕರ್ಮವೇ, ನಿನ್ನ ಕೊಲ್ಲದೇ ಮಾಣೆನು!! ಕಡೆಹಿಸಿಕೊಳ್ಪದೆನ್ನ ನುಡಿಯ ಕೇಳಾ- ಕೆಡದ ಶಿವಶರಣೆಂಬ ಅಲಗನೆ ಕೊಂಡು ನಿನ್ನ ಕೊಲುವೆ ಗೆಲುವೆ ನಾನು! ಬ್ರಹ್ಮಪಾಶವೆಂಬ ಕಳನನೆ ಸವರಿ ವಿಷ್ಣುಮಾಯೆಯೆಂಬ ಎಡಗೋಲ ನೂಕಿ ಎನ್ನೊಡೆಯ ಚೆನ್ನಮಲ್ಲಿಕಾರ್ಜುನಯ್ಯ ತಲೆದೂಗಲಿಕಾಡುವೆ ನಾನು.

ಸರ್ವಜ್ಞ ವಚನ ೧೦

ಮುನ್ನ ಕಾಲದಲಿ ಪನ್ನಗಧರನಾಳು ಎನ್ನೆಯ ಪೆಸರು, ಪುಷ್ಪದತ್ತನು ಎಂದು ಮನಿಪರು ದಯದಿ ಸರ್ವಜ್ಞ

ಸರ್ವಜ್ಞ ವಚನ ೯

ಪರತತ್ವ ತನ್ನೊಳಗೆ ಎರವಿಲ್ಲದಿರುತಿರ್ದು ಪರದೇಶಿಯಂತೆ ಇರುತಿರ್ಪಯೋಗಿಯನು ಪರಮಗುರುವೆಂಬೆ ಸರ್ವಜ್ಞ

ಸರ್ವಜ್ಞ ವಚನ ೮

ಊರಿಂಗೆ ದಾರಿಯನು ಆರು ತೋರಿದರೇನು? ಸಾರಾಯದಾ ನಿಜವ ತೋರುವ ಗುರುವು ತಾ ನಾರಾದರೇನು? ಸರ್ವಜ್ಞ

ಸರ್ವಜ್ಞ ವಚನ ೭

ಗುರುವಿನಾ ವಿಸ್ತರದ, ಪರಿಯನಾನೇನೆಂಬೆ ಮೆರೆವ ಬ್ರಹ್ಮಾಂಡದೊಳಹೊರಗೆ ಅವ ಬೆಳಗಿ ಪರಿಪೂರ್ಣನಿರ್ಪ ಸರ್ವಜ್ಞ

ಸರ್ವಜ್ಞ ವಚನ ೬

ಸರ್ವಜ್ಞನೆಂಬುವನು ಗರ್ವದಿಂದಾದವನೆ ? ಸರ್ವರೊಳಗೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ

ಸರ್ವಜ್ಞ ವಚನ ೫

ಎಲುವಿನೀ ಕಾಯಕ್ಕೆ ಸಲೆ ಚರ್ಮದ ಹೊದಿಕೆ ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ

ಸರ್ವಜ್ಞ ವಚನ ೪

ಹೊಲಸು ಮಾಂಸದ ಹುತ್ತ ಎಲುವಿನಾ ಹಂದರವು ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ ಕುಲವನರಸುವರೆ ಸರ್ವಜ್ಞ

ಸರ್ವಜ್ಞ ವಚನ ೩

ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ ಬಣ್ಣೆಸಿಬರೆದ ಪಟದೊಳಗೆಯಿರುವಾತ ತಣ್ಣೊಳಗೆ ಇರನೇ ಸರ್ವಜ್ಞ

ಸರ್ವಜ್ಞ ವಚನ ೨

ಅಂದಿನ ಪುಷ್ಪದತ್ತ ಬಂದ ವರರುಚಿಯಾಗಿ ಮುದವ ಸಾರೆ, ಸರ್ವಜ್ಞನೆಂದೆನಿಸಿ ನಿಂದವನು ನಾನೆ ಸರ್ವಜ್ಞ

ಸರ್ವಜ್ಞ ವಚನ ೧

ನಂದಿಯನು ಏರಿದನ ಚಂದಿರನ ಮುಡಿದವನ ಕಂದನಂ ಬೇಡಿ ನೆನೆವುತ್ತ ಮುಂದೆ ಹೇಳುವೆನು ಸರ್ವಜ್ಞ

ಬಸವಣ್ಣ ವಚನ ೧೦

ಆಸತ್ತೆನಲಸಿದೆನೆಂದರೆ ಮಾಣದು, ಬೇಸತ್ತೆ ಬೆಂಬಿದ್ದೆನೆಂದರೆ ಮಾಣದು, ಏವೆನೇವೆನೆಂದರೆ ಮಾಣದು- ಕಾಯದ ಕರ್ಮದ ಫಲಭೋಗವು. ಕೂಡಲಸಂಗನ ಶರಣರು ಬಂದು 'ಹೋ ಹೋ ಅಂಜದಿರಂಜದಿರು' ಎಂದರಾನು ಬದುಕುವೆನು.

ಬಸವಣ್ಣ ವಚನ ೯

ಇಂದಿಂಗೆಂತು ನಾಳಿಂಗೆಂತೆಂದು ಬೆಂದೊಡಲ ಹೊರೆಯ ಹೋಯಿತ್ತೆನ್ನ ಸಂಸಾರ! ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲ! ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲ! ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೆ ಕೊಂದಹುದೀ ಮಾಯೆ ಕೂಡಲಸಂಗಮದೇವ!

ಬಸವಣ್ಣ ವಚನ ೮

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ, ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ, ಕೂಟಕ್ಕೆ ಸ್ತ್ರಿಯಾಗಿ ಕೂಡಿದಳು ಮಾಯೆ, ಇದಾವಾವ ಪರಿಯಲ್ಲು ಕಾಡಿತ್ತು ಮಾಯೆ. ಈ ಮಾಯೆಯ ಕಳೆವಡೆ ಎನ್ನಳವಲ್ಲ ನೀವೇ ಬಲ್ಲಿರಿ ಕೂಡಲಸಂಗಮದೇವ.

ಬಸವಣ್ಣ ವಚನ ೭

ಕರಿ ಘನ, ಅಂಕುಶ ಕಿರಿದೆನ್ನಬಹುದೆ ? ಬಾರದಯ್ಯ! ಗಿರಿ ಘನ, ವಜ್ರ ಕಿರಿದೆನ್ನಬಹುದೆ ? ಬಾರದಯ್ಯ! ತಮಂಧ ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ! ಮರಹು ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ! ಕೂಡಲಸಂಗಮದೇವ.

ಬಸವಣ್ಣ ವಚನ ೬

ನಾನೊಂದ ನೆನೆದರೆ, ತಾನೊಂದ ನೆನೆವುದು; ನಾನಿತ್ತಲೆಳೆದರೆ, ತಾನತ್ತಲೆಳೆವುದು; ತಾ ಬೇರೆ ಎನ್ನನಳಲಿಸಿ ಕಾಡಿತ್ತು; ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು; ಕೂಡಲಸಂಗನ ಕೂಡಿಹೆನೆಂದರೆ ತಾನೆನ್ನ ಮುಂದುಗೆಡಿಸಿತ್ತು ಮಾಯೆ.

ಬಸವಣ್ಣ ವಚನ ೫

ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯ, ಇಂದೆನ್ನ ದೇಹಕ್ಕೆ ಗ್ರಹಣವಾಯಿತ್ತು. ಇನ್ನೆಂದಿಂಗೆ ಮೋಕ್ಷವಹುದೋ ?! ಕೂಡಲಸಂಗಮದೇವ.

ಬಸವಣ್ಣ ವಚನ ೪

ಸಂಸಾರಸಾಗರದ ತೆರೆ ಕೊಬ್ಬಿ ಮುಖದ ಮೇಲೆ ಅಲೆವುತ್ತಿದೆ ನೋಡಾ! ಸಂಸಾರಸಾಗರ ಉರದುದ್ದವೇ ಹೇಳಾ ? ಸಂಸಾರಸಾಗರ ಕೊರಲುದ್ದವೇ ಹೇಳಾ ? ಸಂಸಾರಸಾಗರ ಶಿರದುದ್ದವಾದ ಬಳಿಕ ಏನ ಹೇಳುವೆನಯ್ಯ ? ಅಯ್ಯ; ಅಯ್ಯ, ಎನ್ನ ಹುಯ್ಯಲ ಕೇಳಯ್ಯ! ಕೂಡಲಸಂಗಮದೇವ, ನಾನೇವೆನೇವೆನಯ್ಯ!

ಬಸವಣ್ಣ ವಚನ ೩

ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯಾ ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯಾ ಕೂಡಲಸಂಗಮದೇವಾ ಕೇಳಯ್ಯಾ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ...

ಬಸವಣ್ಣ ವಚನ ೨

ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ , ಇದಿರು ಹಳೆಯಲುಬೇಡ ಇದೆ ಅಂತರಂಗ ಶುದ್ದಿ, ಇದೆ ಬಹಿರಂಗ ಶುದ್ದಿ ಇದೆ ನಮ್ಮ ಕೂಡಲ ಸಂಗಮ ದೆವನೊಲಿಸುವ ಪರಿ. -ಕೂಡಲ ಸಂಗಮ ದೇವ......

ಬಸವಣ್ಣ ವಚನ ೧

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಜ್ಯೋತಿಯ ಬಲದಿಂದ ಅಂಧಕಾರದ ಕೇಡು ನೋಡಯ್ಯ ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ ಕೂಡಲ ಸಂಗನ ಶರಣರ ಬಲದಿಂದ ಆತ್ಮನ ಅಹಂಕಾರದ ಕೇಡು ನೋಡಯ್ಯ -ಕೂಡಲ ಸಂಗಮ ದೇವ......