ಅಕ್ಕ ಮಹಾದೇವಿ ವಚನಗಳು ೧೦

ಅಘಟಿತ-ಘಟಿತನ ಒಲವಿನ ಶಿಶು ಕಟ್ಟಿದೆನು ಜಗಕ್ಕೆ ಬಿರುದನು ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಂಗಳಿಗೆ ಇಕ್ಕಿದೆನು ಕಾಲಲ್ಲಿ ತೊಡರನು ಗುರುಕೃಪೆಯೆಂಬ ತಿಗುರನಿಕ್ಕಿ ಮಹಾಶರಣೆಂಬ ತಿಲಕವನಿಕ್ಕಿ ಶಿವಶರಣೆಂಬ ಅಲಗ ಕೊಂಡು ನಿನ್ನ ಕೊಲುವೆ ಗೆಲುವೆ! ಬಿಡು ಬಿಡು ಕರ್ಮವೇ, ನಿನ್ನ ಕೊಲ್ಲದೇ ಮಾಣೆನು!! ಕಡೆಹಿಸಿಕೊಳ್ಪದೆನ್ನ ನುಡಿಯ ಕೇಳಾ- ಕೆಡದ ಶಿವಶರಣೆಂಬ ಅಲಗನೆ ಕೊಂಡು ನಿನ್ನ ಕೊಲುವೆ ಗೆಲುವೆ ನಾನು! ಬ್ರಹ್ಮಪಾಶವೆಂಬ ಕಳನನೆ ಸವರಿ ವಿಷ್ಣುಮಾಯೆಯೆಂಬ ಎಡಗೋಲ ನೂಕಿ ಎನ್ನೊಡೆಯ ಚೆನ್ನಮಲ್ಲಿಕಾರ್ಜುನಯ್ಯ ತಲೆದೂಗಲಿಕಾಡುವೆ ನಾನು.

ಅಕ್ಕ ಮಹಾದೇವಿ ವಚನಗಳು ೯

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು ಹದುಳಿಗರಲ್ಲದವರಲ್ಲಿ ಗಂಧಾಕ್ಷತಯನೊಲ್ಲೆಯಯ್ಯ ನೀನು ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯ ನೀನು ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯ ನೀನು ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯ ನೀನು ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯ.

ಅಕ್ಕ ಮಹಾದೇವಿ ವಚನಗಳು ೮

ದೇವ, ಎನ್ನ ಹೃದಯಕಮಲದೊಳಗೆ ಪ್ರಜ್ವಳಿಪ್ಪ ಬೆಳಗೆ ದೇವ, ಎನ್ನ ಮನದ ಮೊನೆಯೊಳೊಪ್ಪುತಿರ್ಪ ಬೆಳಗಿನೊಳಗೆ ಗುರುವೆ ಬಾರ, ಪರವೆ ಬಾರ, ವರವೆ ಬಾರ, ದೇವದೇವ ಹರನೆ ಬಾರ, ಸುಕೃತಸಾರ ಸರ್ಪಹಾರ ಬಾರ ದೇವ ವೀರಭದ್ರ, ರುದ್ರ, ದುರಿತದೂರ, ವಿಶ್ವರೂಪ ಬಾರ ಮಾರಮಥನ, ಪುಣ್ಯಕಥನ, ಸಹಜಮಿಥುನರೂಪ ಬಾರ ತರಗಿರಿಯ ಪಿರಿಯ ಸಿರಿಯ ಸತ್ಯಶರಣ ಭರಣ ಬಾರ ಬಾರ ಫಲವೆ, ಫಲದ ರಸವೆ, ರಸದ ಸವಿಯ ಸುಖವೆ ಬಾರ ಬಾರ ಗುರುವೆ, ಬಾರ ಪರವೆ, ಬಾರ ವರವೆ ಮಲ್ಲಿನಾಥ ಬಾರ ಧನವೆ, ಬಾರ ಸುಕೃತಸಾರ ಬಾರ ಮಲ್ಲಿನಾಥ ಬರ ಸಿದ್ಧ, ಭವವಿರುದ್ಧ ಸುಪ್ರಸಿದ್ಧ ಮಲ್ಲಿನಾಥ ಬಾರ ಮುಡುಹು ಮುಂದಲೆಗಳ ಕುರುಳನೀವೆ ಮಲ್ಲಿನಾಥ ಬಾರ